ದೇವಿಯೋ? ದೆವ್ವವೋ?

ಸತ್ತೆನೋ ಕೆಟ್ಟೆನೋ ಎಂದು ಸೈಕಲ್ ತುಳಿದು ಹೋಗಿ ತಲುಪುವಷ್ಟರಲ್ಲಿ ಜೈಲಿನ ಬಾಗಿಲು ಮುಚ್ಚಿದ್ದನ್ನು ನೋಡಿ ಮತ್ತೆ ಫೋನ್ ಮಾಡಿದೆ. ಉತ್ತರಿಸಲಿಲ್ಲ. ಸೈಕಲ್ ಗಂಟೆ ಬಾರಿಸಿದೆ, ಕಾಣುತಿದ್ದ ನನ್ನ ಕೋಣೆಯ ಕಿಟಕಿಗೆ ಕಲ್ಲೆಸೆದೆ, “ಗೇಟ್ ತೆಗೆಯೋ…!’ ಎಂದೆಲ್ಲ ಕೂಗಿದೆ. ಸದಿಲ್ಲ. ಕೈ ಬೆವರಿತ್ತು. ತಾರಕಕ್ಕೇರಿದ ಎದೆ ಬಡಿತ  ಸ್ಪಷ್ಟವಾಗಿತ್ತು….

 

♦♦♦♦♦♦♦♦♦♦♦ ಸ್ವಲ್ಪ ರಿವೈಂಡ್ ಮಾಡಿದರೆ ♦♦♦♦♦♦♦♦♦♦♦

 

೨೦೦೮. ಇಂಡಿಯನ್ ಇನ್ಸ್ಟಿಟ್ಯೂಟ್   ಆಫ್ ಸೈನ್ಸ್(IISc)ನಲ್ಲಿ ಕೆಲಸ ಮಾಡುತಿದ್ದ ದಿನಗಳವು. ಮಧ್ಯರಾತ್ರಿ ಹನ್ನೆರಡು ದಾಟಿತ್ತು. ಸಂಶೋಧನಾಲಯದ ಕೊನೆಯ ಬತ್ತಿಯನ್ನು ನಂದಿಸಿ ಬೀಗ ಜಡಿದು ನನ್ನ ಲತ್ಕಾಸಿ ಸೈಕಲ್ ಏರಿ ಜೈಲಿಗೆ ಹೊರಟೆ. ಯಶವಂತಪುರದ ಒಂದು ಗಲ್ಲಿಯಲ್ಲಿ ಒಂದನೇ ಮಹಡಿಯಲ್ಲಿತ್ತು  ನಮ್ಮ ಜೈಲು (ಹಾಸ್ಟೆಲು). ಸಂಶೋಧನಾಲಯದಿಂದ ಜೈಲಿಗೆ ಸುಮಾರು ಎರಡು ಕಿಲೋಮೀಟರಷ್ಟು ಸೈಕಲ್ ತುಳಿಯಬೇಕಿತ್ತು. ಯಾಕೋ ಏನೋ ಹಾಸ್ಟೆಲ್ ಒಳಗಡೆ ಹೋದಾಗೆಲ್ಲ ರಶ್ಯಾದ ಬ್ಲಾಕ್ ಡಾಲ್ಫಿನ್ ಜೈಲಿನ ಚಿತ್ರಣ ಕಣ್ಣೆದುರಿಗೆ ಬರುತಿತ್ತು. ಹಾಗೆಯೇ ಪ್ರಸನ್ನ ಭಟ್ಟನಿಗೊಂದು  ಒಂದು ಫೋನ್ ಮಾಡಿದೆ. ಎತ್ತಲಿಲ್ಲ. ಪುನಃ ಪ್ರಯತ್ನಿಸಿದೆ. ಪುನಃ ಪ್ರಯತ್ನಿಸಿ ಎಂದಿತು BSNL ಹುಡುಗಿ…. ತಕ್ಷಣ ನನ್ನ ಒಂದೆರಡು ಮಿತ್ರರಿಗೆ ಫೋನ್ ಮಾಡಿದೆ. “ಪ್ರಸನ್ನನಿಗೆ ಫೋನ್ ಮಾಡಿ ಎಬ್ಬಿಸ್ರಪ್ಪ, ಏಳ್ತಾ ಇಲ್ಲ ಮಗ” ಎಂದೆ. ಸೈಕಲ್ ವೇಗ ಜೋರಾಯಿತು. ಹಾಗೆಯೇ ಲೆಕ್ಕಾಚಾರಗಳೂ ಜೋರಾದವು….

 

ಯಶವಂತಪುರದ ಬೀದಿ ನಾಯಿಗಳೆಂದರೆ ಚಿಕಾಗೋ ಗ್ಯಾಂಗ್ಸ್ಟರ್ ಗಳಂತೇ…ರಾತ್ರಿಯಾದ ಕೂಡಲೇ ಅವುಗಳ ಕಾರ್ಬಾರು ಶುರು. ನನ್ನಂಥ ‘ಮುಗ್ಧ’ನನ್ನು ಅಟ್ಟಿಸಿಕೊಂಡು ಬರುವುದು ಅವುಗಳ ಹವ್ಯಾಸ. ಗ್ಯಾಂಗ್ಸ್ಟರ್ಗಳಿಂದ ತಪ್ಪಿಸಿಕೊಳ್ಳಲು ಸತ್ತೆನೋ ಕೆಟ್ಟೆನೋ ಎಂದು ಕಾಲ್ಮೆಟ್ಟು ತುಳಿದು ಜೈಲು ತಲುಪುವಷ್ಟರಲ್ಲಿ ಗೇಟ್ ಮುಚ್ಚಿತ್ತು. ಹರ ಪ್ರಯತ್ನಿಸಿದರೂ ಜೊತೆವಾಸಿ ಪ್ರಸನ್ನ ಭಟ್ಟ ನನ್ನ ಫೋನ್ ಉತ್ತರಿಸಲಿಲ್ಲ. ಕಣ್ಣುಜ್ಜುತ್ತ ಕೆಳಗಿಳಿದು ಬಂದ ಜೈಲಿನ ಸೆಂಟ್ರಿ ಚಂದ್ರು (ಹಾಸ್ಟೆಲ್ ಮಾಲಿ).  ಚಂದ್ರು  ಡಿಟ್ಟೋ 7UP ಬಾಟಲಿಯ ಮೇಲಿರುವ ಚೊಂಗನಂತಿದ್ದ. ಅತಿ ಸಪುರವಾದ ಮೈಕಟ್ಟು, ಸ್ವಲ್ಪ ಕಪ್ಪಿನ ಮೈ ಬಣ್ಣ, ಜಿಕ್ಕಾದ ಬಾಳೆಕಯಿಯಂಥ ಮುಖ, ಗುಂಗರು ಕೂದಲು, ಕುರುಚಲು ಗಡ್ಡ. “ಈಗ ಬತಾವಾ?..ಇಂಗ್ ಅಂದ್ರ ಎಂಗೆ?” ಎನ್ನುತ್ತಾ ಗೇಟ್ ತೆಗೆದ. ಸೈಕಲ್ ಒಳಗೆ ಹತ್ತಿಸಿಟ್ಟು ಕೋಣೆ ನಂಬರ್ ೪೭ನ ಬಾಗಿಲು ಬಡಿದೆ. ಝಾಡಿಸಿ ಒದ್ದೆ. “ಪ್ರಸನ್ನಾ…ಲೇ ಭಟಾ….” ಎಂದವನ ಜನ್ಮದಲ್ಲಿ ಯಾರೂ ಅಷ್ಟೊಂದು ಬಾರಿ ಕರೆದಿರ್ಲಿಕಿಲ್ಲ. ಜೈಲಿನಲ್ಲಿ ಮಾತ್ರ ಘೋರ ನಿಶ್ಯಬ್ದತೆ ಮನೆ-ಮಾಡಿತ್ತು. ಚಂದ್ರು ಬಂದು “ಅದ್ಯಾಕ್ ಅಂಗ್ ಬಡ್ಕತಿಯ? ಅಂಬುಲನ್ಸ್ ಕರ್ಸಬೇಕಾ?” ಎಂದ. ದುಗುಡ ಹೆಚ್ಹಾಗಿ ನನ್ನ ಕಿವಿಗಳೆರಡೂ ಕೆಂಪಾಗಿದ್ದವು. ಅರ್ಧ ಗಂಟೆಯ ಸತತ ಪ್ರಯತ್ನ ವಿಫಲವಾಗಿತ್ತು. ಬೆಚ್ಚನೆ ಮಲಗಿದ ನೆರೆಹೊರೆಯವರ ಗೊರಕೆಯ ಜುಗಲ್ ಬಂದಿ ನನ್ನನ್ನು ಲೇವಡಿ ಮಾಡಿದಂತಿತ್ತು. ಐದು ನಿಮಿಷ ಶೂನ್ಯನಾದೆ. ಕೋಣೆಯೊಳಗಿಂದ ಬರುತ್ತಿರುವ ಬುಸುಗುಡುವ ಶಬ್ದ ಕೇಳಿ ಒಮ್ಮೆ  ಬೆಚ್ಚಿದೆ!!…..

 

ನನ್ನದು, ಪ್ರಸನ್ನನದು ಸುಮಾರು ಆರು ವರ್ಷಗಳಿಂದ ಚಡ್ಡಿ ದೋಸ್ತಿ. ಒಂದೇ ವಿಭಾಗದಲ್ಲಿ, ಒಂದೇ ಸಾಲಿನಲ್ಲಿ ಜೀವರಸಾಯನ ಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿಗಾಗಿ ಹಕ್ಕಿ ಹಾರಿಸಿದ್ದೇವೆ. ನಿಜಲಿಂಗಪ್ಪ ಹಾಸ್ಟೆಲಿನಲ್ಲಿ ಎರಡು ವರ್ಷ ಮುದಿಯಾಗಿ ಅಳಿದು ಉಳಿದಿದ್ದೇವೆ. ಒಸಾಮಾನಿಂದ ಹಿಡಿದು ಓಬವ್ವನವರೆಗೂ ಹಾಸ್ಯ, ಗಂಭೀರ-ಚರ್ಚೆ ನಡೆಸಿದ್ದೇವೆ…ಒಂದನ್ನು ಬಿಟ್ಟು ಉಳಿದುದೆಲ್ಲವನ್ನು ಹಂಚಿಕೊಂಡಿದ್ದೇವೆ. ಆದರೆ ಇವನ ನಿದ್ರಾ ಶಕ್ತಿಯ ಅರಿವಿರಲಿಲ್ಲ ನನಗೆ. ಏಕೆಂದರೆ ನಮ್ಮಿಬ್ಬರ ಕೋಣೆ ಬೇರೆಯಾಗಿತ್ತು. ಇನ್ನೊಬ್ಬ ಆಪ್ತಮಿತ್ರ ರೋಹಿತ್ ಅಲಿಯಾಸ್ ಶೆಟ್ಟಿ, ಪ್ರಸನ್ನನ ಜೊತೆವಾಸಿ. ಎಲ್ಲದನ್ನು ಹಂಚಿಕೊಂಡರೂ ಭಟ್ಟನ ನಿದ್ರಾವಿಪರೀತವನ್ನು ಮಾತ್ರ ನನ್ನಿಂದ ಮುಚ್ಚಿಟ್ಟಿದ್ದ…ಕರ್ಮ, ನಾನು ತೆರಬೇಕಾಯ್ತು. ಪಾಪಿ, ಗಿಡುಗ, ಹದ್ದು, ಡಿ ಕೆ ಬೋಸ್, ಹಾಳಾಗ್ ಹೋಗು ಅಂತೆಲ್ಲ ಶಪಿಸುತ್ತ ಕೊನೆಗೊಮ್ಮೆ ಬಾಗಿಲಿಗೆ ಒದ್ದು ಇನ್ಯಾವ್ದಾದ್ರೂ  ರೂಂ ಖಾಲಿ ಇದ್ಯಾ ಅಂತ ವಿಚಾರಿಸಿದೆ. “ಇಂಗಾಯ್ಸ್ ಬಾ.. ನನ್ ರೂಮ್ನಾಗ್ ಮಾತ್ರ್ ಒಂದ್ ಮಂಚ ಖಾಲಿ ಅಯ್ತೆ”  ಎಂದು ಹೇಳಿ ನಾಚಿಬಿಟ್ಟ ಚಂದ್ರು. ಒಮ್ಮೆಯೇ ಪಾದ ತಣ್ಣಗಾಯಿತು….ಇನ್ನು ಇಲ್ಲಿ ನಿಂತರೆ ಸತ್ತೆ ಅಂದುಕೊಂಡು ಜೈಲ್ನಿಂದ ಸೈಕಲ್ ಹೊರತೆಗೆದು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೊರಟೆ…. ನಿದ್ರೆ ನನ್ನನ್ನು ತೂಕಡಿಸ್ತಾ ಇತ್ತು. ದೂರದಲ್ಲಿ ಬೊಗಳುತ್ತಿದ್ದ ನಾಯಿಯೊಂದು ಹತ್ತಿರ ಬಂದು ಗುರ್ರ್ ಎಂದಿತು.

 

ಜೀವನದಲ್ಲಿ ಮೊದಲ ಬಾರಿ ಚಳಿ, ನಿದ್ದೆ, ಕೋಪ ಮತ್ತು ಅಸಹಾಯಕತೆಗಳ ಸಂಗಮವು ಮಧ್ಯರಾತ್ರಿಯಲ್ಲಾಗಿತ್ತು. ಸಂಶೋಧನಾಲಯದಿಂದ ಶುರುವಾದ ಸಂಶಯ ನಿಜವಾಗಿತ್ತು. ಬಡ್ಡಿ ಮಗ, ಹಿಂದಿನ ದಿನವೂ ಹೀಗೆ ಬಾಗಿಲು ತೆಗೆಯದೇ ನಾನು ವಾಪಸ್ ಸಂಶೋಧನಾಲಯಕ್ಕೆ ಹೋಗಿ ಮಲಗುವಂತೆ ಮಾಡಿದ್ದ. ಈ ಬಾರಿ ಬಾಗಿಲ ಚಿಲಕ ತೆಗೆದಿಡುತ್ತೇನೆ ಎಂದೆಲ್ಲ ಭಂಡ ಆಶ್ವಾಸನೆ ನೀಡಿದ್ದ. ಸಂಶೋಧನಾಲಯ ತಲುಪುವಷ್ಟರಲ್ಲಿ ಮನಸ್ಸು ಪ್ರಶಾಂತವಾಗಿತ್ತು. ತಂಗಾಳಿಯೊಡನೆ ವಿಹ್ವಲಗಳೆಲ್ಲ ಹಾರಿಹೋಗಿತ್ತು. ಇವನನ್ನು ಬಾಳಸಂಗಾತಿ ಎಂದು ನಂಬಿದ ಹೆಣ್ಣು ಗೋವಿಂದ ಎಂದು ಯೋಚಿಸಿ ಕಿಸಿಕಿಸಿ ನಕ್ಕಿಬಿಟ್ಟೆ. ಸಂಶೋಧನಾಲಯದ ಬಾಗಿಲು ತೆಗೆದು, ಕುರ್ಚಿಗಳನ್ನು ಸಾಲಾಗಿಟ್ಟು ಅದರ ಮೇಲೆ ಹಾಯಾಗಿ ನಿದ್ರಿಸಿದೆ.  ಆದರೆ ಆ ದಿನ ಒಂದು ಮಾತ್ರ  ಮೊದಲು ಸ್ಪಷ್ಟವಾಗಿದ್ದದ್ದು ಅಸ್ಪಷ್ಟವಾಯ್ತು – ನಿದ್ರಾದೇವಿಯೋ? ದೆವ್ವವೋ?
Advertisements